ವುಡ್ರೋ ವಿಲ್ಸನ್
	1856-1924. ಅಮೆರಿಕದ 28ನೆಯ ಅಧ್ಯಕ್ಷ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕøತ. ಸ್ಟಾಂಟನ್‍ವದಲ್ಲಿ 1856 ಡಿಸೆಂಬರ್ 28ರಂದು ಜನಿಸಿದ. ತಂದೆ ಜೋಸೆಫ್ ರಗ್ಗ್‍ಲೆಸ್ ವಿಲ್ಸನ್, ತಾಯಿ ಜನೆಟ್. ಇವನು ಜಾರ್ಜಿಯ, ದಕ್ಷಿಣ ಕೆರೋಲಿನಗಳಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನ್ಯೂಜರ್ಸಿ ಕಾಲೇಜಿನಿಂದ ಪದವಿ ಪಡೆದ (1879). ಅನಂತರ ಇವನು ವರ್ಜೀನಿಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದ(1883). ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯ ದಲ್ಲಿ ಅಧ್ಯಾಪಕನಾಗಿ ನೇಮಕಗೊಂಡ. ಇವನು 1885ರಲ್ಲಿ ಕಾಂಗ್ರೆಸನಲ್ ಗೌರ್ನಮೆಂಟ್, ಎ ಸ್ಟಡಿ ಇನ್ ಅಮೆರಿಕನ್ ಪಾಲಿಟಿಕ್ಸ್ ಮುಂತಾದ ಕೃತಿಗಳನ್ನು ಪ್ರಕಟಿಸಿದ. 1886 ಜೂನ್‍ನಲ್ಲಿ ಇವನು ಪಿಎಚ್.ಡಿ ಪದವಿ ಪಡೆದ. ಇವನು ಹೆಲೆನ್ ವಾಯಿಸ್ ಆಕ್ಸಾನ್ ಎಂಬವಳನ್ನು ವಿವಾಹವಾದ (1885 ಜೂನ್ 24). ಇವನು ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ ದ ಅಧ್ಯಕ್ಷನಾಗಿ ಆಯ್ಕೆಗೊಂಡ(1902 ಜೂನ್ 9). 1910ರಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಇವನು ನ್ಯೂಜರ್ಸಿಯಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನ್ಯೂಜರ್ಸಿ ರಾಜ್ಯದ ಗವರ್ನರ್ ಆದ. ಹಲವಾರು ಸುಧಾರಣೆಗಳನ್ನು ಕೈಗೊಂಡು ಜನಪ್ರಿಯತೆ ಗಳಿಸಿದ.

	1912ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇವನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಮೆರಿಕದ 28ನೆಯ ಅಧ್ಯಕ್ಷನಾಗಿ ಆಯ್ಕೆಗೊಂಡ.

	ಅಧಿಕಾರದ ಮೊದಲ ಅವಧಿಯಲ್ಲಿ ಇವನು ಹಲವು ಆಂತರಿಕ ನೀತಿಗಳನ್ನು ಜಾರಿಗೆ ತಂದ. ಅಂಡರ್ ವುಡ್ ಟ್ಯಾರಿಫ್ ಆಕ್ಟ್ ಜಾರಿಗೊಳಿಸಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆಗೊಳಿಸಿದ. ದ ಫೆಡರಲ್ ರಿಸರ್ವ್ ಆಕ್ಟ್‍ನ ಮೂಲಕ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸಿ, ಅವುಗಳ ಮೇಲೆ ನಿಯಂತ್ರಣ ಸಾಧಿಸಿದ. ಸರ್ಕಾರ ಹಾಗೂ ಬ್ಯಾಂಕುಗಳ ಆರ್ಥಿಕ ವ್ಯವಹಾರಗಳನ್ನು ಸಮನ್ವಯಗೊಳಿಸಿದ. 1914ರಲ್ಲಿ ಕ್ಲೇಟನ್ ಆಂಟಿ ಟ್ರಸ್ಟ್ ಆಕ್ಟ್ ಮೂಲಕ ಬೃಹತ್ ವಾಣಿಜ್ಯ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಿ, ಭ್ರಷ್ಟಾಚಾರ ತಡೆಗಟ್ಟಿದ. ರೈತರ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಶಾಸನಗಳನ್ನು ಜಾರಿಗೊಳಿಸಿದ(1916).

	ಇವನು ಕೈಗೊಂಡ ಶ್ರೇಷ್ಠ ಹಾಗೂ ದಕ್ಷ ಆಡಳಿತ ನೀತಿಗಳಿಂದಾಗಿ 1916ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಚಾಲ್ರ್ಸ್ ಇವಾನ್ಸ್ ಹ್ಯೂಸ್‍ನನ್ನು ಸೋಲಿಸುವ ಮೂಲಕ ಎರಡನೆಯ ಅವಧಿಗೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಗೊಂಡ(1916 ನವೆಂಬರ್ 7).

	ಒಂದನೆಯ ಮಹಾಯುದ್ಧದಲ್ಲಿ ಅಮೆರಿಕ ತಟಸ್ಥ ನೀತಿ ಅನುಸರಿಸಿದರೂ ಜರ್ಮನಿಯ ಜಲಾಂತರ್ಗಾಮಿ ಹಡಗುಗಳು ಅಮೆರಿಕದ ಹಡಗುಗಳಿಗೆ ತೊಂದರೆ ಉಂಟು ಮಾಡುತ್ತಿದ್ದುವು. 1915ರಲ್ಲಿ ಬ್ರಿಟನ್‍ಗೆ ಸೇರಿದ ಲೂನಿಟಾನಿಯ ಎಂಬ ಹಡಗನ್ನು ಜರ್ಮನಿಯ ಜಲಾಂತರ್ಗಾಮಿ ಹಡಗು ಮುಳುಗಿಸಿದ್ದರಿಂದ ಅದರಲ್ಲಿದ್ದ 1,198 ಜನ ಸಾವನ್ನಪ್ಪಿದರು (1915 ಮೇ 7). ಈ ಹಡಗಿನಲ್ಲಿ 128 ಜನ ಅಮೆರಿಕನ್ನರೂ ಇದ್ದರು. ಈ ದುರಂತವನ್ನು ಅಮೆರಿಕ ಸಹಿಸಿಕೊಂಡಿತಾದರೂ ಜರ್ಮನಿಯ ದುರಾಕ್ರಮಣ ನೀತಿಯನ್ನು ಪ್ರತಿಭಟಿಸಿ ಅಮೆರಿಕ ಅನ್ಯಮಾರ್ಗವಿಲ್ಲದೆ ಒಂದನೆಯ ಮಹಾಯುದ್ಧದಲ್ಲಿ ಪ್ರವೇಶಿಸಬೇಕಾಯಿತು. 1917 ಏಪ್ರಿಲ್ 6ರಂದು ಅಮೆರಿಕ ಯುದ್ಧಕ್ಕೆ ಪ್ರವೇಶಿಸಿತು. ಇವನು ತನ್ನ ವಾಕ್‍ಚಾತುರ್ಯ ಹಾಗೂ ಜಾಣ್ಮೆಯಿಂದ ಪ್ರಜೆಗಳಲ್ಲಿ ಹಾಗೂ ಸೈನಿಕರಲ್ಲಿ ಉತ್ಸಾಹ ತುಂಬಿದ. ವಿಶ್ವಶಾಂತಿ ರಕ್ಷಣೆಗಾಗಿ ಅಮೆರಿಕ ಯುದ್ಧ ಪ್ರವೇಶಿಸಿದೆ ಎಂದು ಘೋಷಿಸಿದ. ಅಮೆರಿಕದ ಪ್ರವೇಶದಿಂದ ಮಿತ್ರರಾಷ್ಟ್ರಗಳ ಬಲ ಹೆಚ್ಚಿ, ಜರ್ಮನಿಯನ್ನು ಸೋಲಿಸಲಾಯಿತು. ಜರ್ಮನಿಯ ಸೋಲು ಮತ್ತು ಶರಣಾಗತಿ ಅದರ ಮಿತ್ರ ರಾಷ್ಟ್ರಗಳ ಸೋಲಿಗೆ ನಾಂದಿಯಾಯಿತು. ಅನಂತರ ಪ್ಯಾರಿಸ್‍ನಲ್ಲಿ ಶಾಂತಿ ಸಮ್ಮೇಳನ 1919 ಜನವರಿ 18ರಂದು ಜರುಗಿತು. ಈ ಸಮ್ಮೇಳನದಲ್ಲಿ ಇವನು ವಿಶ್ವಶಾಂತಿಗಾಗಿ ಹದಿನಾಲ್ಕು ಅಂಶಗಳನ್ನು ಪ್ರಸ್ತಾಪಿಸಿದ. ಈ 14 ಅಂಶಗಳು ಆಧುನಿಕ ಉದಾರ ತತ್ತ್ವಗಳ ಆಧಾರದ ಮೇಲೆ ರೂಪಿತವಾಗಿದ್ದವು. ಇವನ ಈ ತತ್ತ್ವಗಳನ್ನು ಯುರೋಪಿನ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡವು. ಅವುಗಳಲ್ಲಿ ವಸಾಹತು ಶಾಹಿ ಅಂತ್ಯ, ಶಾಂತಿಗಾಗಿ ರಾಷ್ಟ್ರಗಳ ಸಂಘ (ಲೀಗ್ ಆಫ್ ನೇಷನ್ಸ್) ಸ್ಥಾಪನೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಕುಗ್ಗಿಸುವುದು ಪ್ರಮುಖವಾಗಿದ್ದವು. ರಾಷ್ಟ್ರಗಳ ಸಂಘಕ್ಕೆ ಮಿತ್ರರಾಷ್ಟ್ರಗಳ ಸಹಕಾರ ಪಡೆಯಲು ಜರ್ಮನಿಯ ಮೇಲೆ ಕಠಿಣ ಷರತ್ತುಗಳನ್ನು ಹೇರಲಾಯಿತು. ವರ್ಸೇಲ್ಸ್ ಒಪ್ಪಂದದ (1919 ಜೂನ್ 28) ಅಂಶಗಳನ್ನು ಸೆನೆಟ್ ತಿರಸ್ಕರಿಸಿತಲ್ಲದೆ ಅಮೆರಿಕ ರಾಷ್ಟ್ರಗಳ ಸಂಘಕ್ಕೆ ಸೇರಲಿಲ್ಲ. ಇವನು ಒಂದನೆಯ ಮಹಾಯುದ್ಧದಲ್ಲಿ ವಿಶ್ವಶಾಂತಿಗಾಗಿ ಶ್ರಮಿಸಿದ್ದಕ್ಕಾಗಿ 1920ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇವನು 1921ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ. ನಿವೃತ್ತಿ ಅನಂತರ ವಕೀಲವೃತ್ತಿ ನಿರ್ವಹಿಸಲು ಪ್ರಯತ್ನಿಸಿದರೂ ಅನಾರೋಗ್ಯದಿಂದ ಸಾಧ್ಯವಾಗಲಿಲ್ಲ. ಇವನು 1924 ಫೆಬ್ರವರಿ 3ರಂದು ವಾಷಿಂಗ್ಟನ್‍ನಲ್ಲಿ ನಿಧನಹೊಂದಿದ.  
 (ಎಮ್.ಎಸ್.ಕೆ.ಒ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ